ಉತ್ತರ ಪ್ರದೇಶ: ತಾಯಿಯೇ ಮಗಳನ್ನು ಕೊಂದು ಮನೆಯ ಹಿಂಭಾಗ ಹೂತುಹಾಕಿರುವ ಪ್ರಕರಣ ಸಂಬಂಧ ಮಹಿಳೆಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡವನ್ನು ವಿಧಿಸಿದೆ.
ಎ.2020ರಲ್ಲಿ ವ್ಯಕ್ತಿಯೊಬ್ಬರು ತನ್ನ 14 ವರ್ಷದ ಸಂಬಂಧಿಯೊಬ್ಬರು ಹಲವು ದಿನಗಳಿಂದ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಹಳ್ಳಿಯ ಹೊರಗೆ ಕೂಲಿ ಕೆಲಸ ಮಾಡುವ ಬಾಲಕಿಯ ತಂದೆಗೂ ಆಕೆಯ ಬಗ್ಗೆ ತಿಳಿದಿರಲಿಲ್ಲ. ತೀವ್ರ ತನಿಖೆ ಬಳಿಕ ಪೊಲೀಸರು ಮೇ 4, 2020ರಂದು ಬಾಲಕಿಯ ಶವವನ್ನು ಆಕೆಯ ಮನೆಯ ಹಿಂಭಾಗದ ಹಿತ್ತಲಲ್ಲಿ ಪತ್ತೆ ಮಾಡಿದ್ದಾರೆ.
ಮ್ಯಾಜಿಸ್ಟ್ರೇಟ್ ಮೇಲ್ವಿಚಾರಣೆಯಲ್ಲಿ ಸಮಾಧಿ ಮಾಡಲಾಯಿತು. ಬಾಲಕಿಯ ದೇಹ ವಶಪಡಿಸಿಕೊಂಡ ಬಳಿಕ ಪೊಲೀಸರು ಆಕೆಯ ತಾಯಿಯನ್ನು ತೀವ್ರವಾಗಿ ವಿಚಾರಿಸಿದರು. ಆಕೆ ತನ್ನ ಮಗಳ ನಡತೆ ಮೇಲೆ ಅನುಮಾನವಿತ್ತು ಹೀಗಾಗಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದರು.
ಆ ಬಳಿಕ ಮಹಿಳೆಯನ್ನು ಬಂಧಿಸಲಾಯಿತು. ಅಪರಾಧವನ್ನು ಮರೆಮಾಚಲು ಶವವನ್ನು ಹೂತು ಹಾಕಿದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಅದು ಸಹಜ ಸಾವಲ್ಲ ಕೊಲೆ ಎಂಬುದು ದೃಢಪಟ್ಟಿದೆ.
ಈ ಪ್ರಕರಣದಲ್ಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದರು, ತಾಯಿ ಮಗಳ ನಡತೆ ಶಂಕಿಸಿ ಆಕೆಯನ್ನು ಕೊಂದಿದ್ದಾಳೆ ಎಂದು ಪ್ರಾಸಿಕ್ಯೂಷನ್ ವಕೀಲರು ಹೇಳಿದ್ದಾರೆ.
ಸುದೀರ್ಘ ವಿಚಾರಣೆಯಲ್ಲಿ ಮೂವರು ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. 50 ಕ್ಕೂ ಹೆಚ್ಚು ವಿಚಾರಣೆಗಳು ನಡೆದವು ಮತ್ತು ಪ್ರಾಸಿಕ್ಯೂಷನ್‌ನಿಂದ ಏಳು ಸಾಕ್ಷಿಗಳನ್ನು ಹಾಜರುಪಡಿಸಲಾಯಿತು.
ಇದೀಗ ನ್ಯಾಯಾಲಯವು ಆರೋಪಿ ಮಹಿಳೆಗೆ ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ ಎಂದು ವರದಿಯಾಗಿದೆ.