ಚಲಿಸುತ್ತಿದ್ದ ಕಾರಿನ ಡಿಕ್ಕಿಯಿಂದ ಹೊರಬಂದ ಕೈ: ಕಾರು ಪೊಲೀಸರ ವಶಕ್ಕೆ; ವೀಡಿಯೊ ವೈರಲ್‌

  April 15,2025
news-banner
ಮಹಾರಾಷ್ಟ್ರ: ನವಿ ಮುಂಬೈನ ವಾಶಿ ಮತ್ತು ಸನ್ಪಾಡಾ ರೈಲು ನಿಲ್ದಾಣಗಳ ನಡುವೆ ಇನ್ನೋವಾ ಕಾರಿನ ಡಿಕ್ಕಿಯಿಂದ ವ್ಯಕ್ತಿಯೊಬ್ಬನ ಕೈ ಹೊರಚಾಚಿಕೊಂಡಿರುವ ವೀಡಿಯೊ ವೈರಲ್ ಆಗಿರುವ ಘಟನೆ ವರದಿಯಾಗಿದೆ. 

ವೈರಲ್ ಆಗಿರುವ ವೀಡಿಯೊದಲ್ಲಿ, ನವಿ ಮುಂಬೈನ ಸನ್ಪಾಡಾ ಮತ್ತು ವಾಶಿ ರೈಲು ನಿಲ್ದಾಣಗಳ ನಡುವಿನ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿರುವ ಇನ್ನೋವಾ ಕಾರಿನಿಂದ ವ್ಯಕ್ತಿಯ ಕೈ ನೇತಾಡುತ್ತಿರುವುದು ಕಂಡುಬಂದಿದೆ.

ಇದಾದ ಬಳಿಕ, ಹಿಂದಿನಿಂದ ಬರುತ್ತಿದ್ದ ಮತ್ತೊಬ್ಬ ಚಾಲಕ ಇದನ್ನು ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾನೆ. 

ವೀಡಿಯೊ ವೈರಲ್ ಆದ ನಂತರ, ಪೊಲೀಸರು ಮತ್ತು ಅಪರಾಧ ವಿಭಾಗದ ತಂಡವು ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ಸೋಮವಾರ ಸಂಜೆ ವೀಡಿಯೊ ಚಿತ್ರೀಕರಿಸಲಾಗಿದೆ.

ಸೋಮವಾರ ರಾತ್ರಿ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. 

ಕಾರಿನಲ್ಲಿ ಕುಳಿತಿದ್ದ ಮೂವರು ಯುವಕರು ತಮ್ಮ ಲ್ಯಾಪ್‌ಟಾಪ್ ಬ್ರಾಂಡ್‌ನ ಪ್ರಚಾರಕ್ಕೆ ಸಂಬಂಧಿಸಿದ ರೀಲ್ ಅನ್ನು ತಯಾರಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಮೂವರೂ ಯುವಕರು ಮುಂಬೈ ನಿವಾಸಿಗಳಾಗಿದ್ದು, ಮದುವೆಯಲ್ಲಿ ಭಾಗವಹಿಸಲು ನವಿ ಮುಂಬೈಗೆ ಬಂದಿದ್ದರು. ಅವರು ಈ ವೀಡಿಯೊವನ್ನು ಒಂದೇ ಸ್ಥಳದಲ್ಲಿ ಚಿತ್ರೀಕರಿಸಿದ್ದಾರೆ. ನಾವು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ ಮತ್ತು ಎಲ್ಲಾ ಸಂಗತಿಗಳನ್ನು ದೃಢಪಡಿಸಿದ್ದೇವೆ. ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಅಜಯ್ ಲ್ಯಾಂಡ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಪೊಲೀಸರು ಆತ ಮಾಡಿದ ಎಲ್ಲಾ ವೀಡಿಯೊಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಿದರು. ಮೊದಲ ವೀಡಿಯೊದಲ್ಲಿ, ವ್ಯಕ್ತಿಯೊಬ್ಬರ ಕೈ ಕಾರಿನ ಡಿಕ್ಕಿಯಿಂದ ಹೊರಬರುವುದನ್ನು ಕಾಣಬಹುದು, ನಂತರ ಒಬ್ಬ ಬೈಕರ್ ಬಂದು ಕಾರನ್ನು ನಿಲ್ಲಿಸಿ ಡಿಕ್ಕಿಯನ್ನು ತೆರೆಯಲು ಕೇಳುತ್ತಾನೆ. ಟ್ರಂಕ್ ತೆರೆದ ತಕ್ಷಣ, ಒಳಗೆ ಕುಳಿತಿದ್ದ ಯುವಕ, "ನಿನಗೆ ಭಯವಾಗಿದೆಯೇ? ಆದರೆ ನಾನು ಸತ್ತಿಲ್ಲ, ಬದುಕಿದ್ದೇನೆ. ಈಗ ನಮ್ಮ ಲ್ಯಾಪ್‌ಟಾಪ್‌ಗಳಲ್ಲಿ ನಿಮಗೆ ಸಿಗುವ ಉತ್ತಮ ಕೊಡುಗೆಗಳ ಬಗ್ಗೆ ನಮ್ಮ ಮಾತು ಕೇಳಿ" ಎಂದು ಹೇಳುತ್ತಾನೆ. ಈ ವೀಡಿಯೊದಲ್ಲಿ ಅರ್ಧ ಭಾಗ ಮಾತ್ರ ವೈರಲ್‌ ಆಗಿ ಕೋಲಾಹಲ ಸೃಷ್ಟಿಸಿತ್ತು.

ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ, ಆದರೆ ಪೊಲೀಸ್ ತನಿಖೆ ಇನ್ನೂ ನಡೆಯುತ್ತಿದೆ. ಘಟನಾ ಸಂಬಂಧ ನವಿ ಮುಂಬೈ ಪೊಲೀಸರು ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

Leave Your Comments