ಸುರತ್ಕಲ್: ಎ.18 ಅಡ್ಯಾರ್ ಗಾರ್ಡನ್ ಪ್ರತಿಭಟನೆ ಪ್ರಚಾರಾರ್ಥ ಸುನ್ನಿ ಸಂಘಟನೆಗಳಿಂದ ಪ್ರತಿಭಟನಾ ಸಭೆ

  April 15,2025
news-banner
ಸುರತ್ಕಲ್: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಎ.18ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಯ ಪ್ರಚಾರಾರ್ಥವಾಗಿ ಸೋಮವಾರ ಕಾಟಿಪಳ್ಳದಲ್ಲಿ ಕ್ಯಾಂಡಲ್ ದೀಪಗಳೊಂದಿಗೆ ಪ್ರತಿಭಟನಾ ಸಭೆ ನಡೆಯಿತು.

ಪ್ರತಿಭಟನೆ ನೇತೃತ್ವ ವಹಿಸಿ ಕೈಕಂಬ ಮರ್ಕಝ್ ನ ಪ್ರಾಂಶುಪಾಲರಾದ ಬದ್ರುದ್ದೀನ್ ಅಝ್ಹರಿ ಅವರು ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಮೇಲೆ ಕರಾಳ ಕಾನೂನುಗಳನ್ನು ಹೇರುವ ಮೂಲಕ ದೌರ್ಜನ್ಯ ಎಸಗುತ್ತಿದೆ ಎಂದು ದೂರಿದರು. ಅಲ್ಲದೆ, ಎ.18ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ರ್ಯಾಲಿಗೆ ಸರ್ವರನ್ನೂ ಆಹ್ವಾನಿಸಿದರು.

ಪ್ರತಿಭಟನೆಗೆ ಕೈಕಂಬ ಸರ್ಕಲ್ ಸುನ್ನಿ ಸಂಘಟನೆಗಳಾದ ಎಸ್ಸೆಸ್ಸೆಫ್, ಎಸ್ ವೈ ಎಸ್, ಕೆ.ಎಂ.ಜೆ. ಸಂಪೂರ್ಣ ಬೆಂಬಲ ಸೂಚಿಸಿದವು. ಇದೇ ವೇಳೆ ಕೇಂದ್ರ ಸರ್ಕಾರ ಮತ್ತು ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
 
ಈ ಸಂದರ್ಭ ಎಸ್ ವೈ ಎಸ್ ನ ನೌಫಲ್ ಇಂಡಿಯನ್ ಟೂಲ್ಸ್, ಬಷೀರ್ ಐಡಿಯಲ್, ಅಬ್ದುಲ್ ರಹಿಮಾನ್ ಕೋಯಾ ಉಸ್ತಾದ್, ಅಬ್ದುಲ್ ಅಝೀಜ್ ಎಸ್.ಎಂ.ಎ., ಕೆ.ಎಂ.ಜೆ. ಪ್ರದಾನ ಕಾರ್ಯದರ್ಶಿ ಶೇಕ್ ಮುಹಮ್ಮದ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave Your Comments