ಬೆಂಗಳೂರು: ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ ನೀಡಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಕೇರಳದ ಕೋಝಿಕ್ಕೋಡ್ ಸಮೀಪದ ಗ್ರಾಮದಿಂದ ಬಂಧಿಸಿದ್ದಾರೆ.
ಬಂಧಿತ ಆರೋಪಿ ಸಂತೋಷ್ ಡೆನಿಯಲ್ ಎಂದು ತಿಳಿದು ಬಂದಿದೆ.
ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಆರೋಪಿಯ ಚಲನವಲನಗಳನ್ನು ಸುಮಾರು 1,800ಕ್ಕೂ ಹೆಚ್ಚು ಸಿಸಿ ಟಿವಿಗಳಲ್ಲಿ ಪರಿಶೀಲಿಸಿದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎ. 3ರಂದು ಮುಂಜಾನೆ ಆರೋಪಿಯು ಯುವತಿ ಮೇಲೆರಗಿದ್ದ. ಸ್ನೇಹಿತೆ ಜೊತೆ ಯುವತಿ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಬಂದು ಕಿರುಕುಳ ನೀಡಿ ಪರಾರಿಯಾಗಿದ್ದ ಎಙದು ತಿಳಿದು ಬಂದಿದೆ.
ಯುವತಿಗೂ ಆರೋಪಿಗೂ ಯಾವುದೇ ಪರಿಚಯ ಇರಲಿಲ್ಲ. ಘಟನೆ ಬಳಿಕ ಬೆಂಗಳೂರು ನಗರ ತೊರೆದಿದ್ದ ಆರೋಪಿ ತಲೆಮರೆಸಿಕೊಂಡಿದ್ದ. ಈ ಸಂಬಂಧ ಸ್ಥಳೀಯ ನಿವಾಸಿ ಲೋಕೇಶ್ ಗೌಡ ದೂರು ನೀಡಿದ್ದರು.
ಆರೋಪಿಯು ಕಾರು ಶೋರೂಂನಲ್ಲಿ ಟೆಸ್ಟ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಯುವತಿಗೆ ಕಿರುಕುಳ ನೀಡಿದ ಬಳಿಕ ತಮಿಳುನಾಡು, ಕೇರಳದಲ್ಲಿ ತಪ್ಪಿಸಿಕೊಂಡು ಓಡಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದು ಬಂದಿತ್ತು ಎಂದು ಹೇಳಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಕುಡಿತದ ಮತ್ತಿನಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ತಿಳೀದು ಬಂದಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.