ತೆಲಂಗಾಣ: ತನ್ನ ಅತಿಯಾದ ಮೂಢನಂಬಿಕೆಯಿಂದ ಸ್ವಂತ ಮಗಳನ್ನೇ ತಾಯಿಯೊಬ್ಬಳು ಬಲಿ ನೀಡಿದ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮೋತೆ ಮಂಡಲದ ಮೇಕಲ ತಾಂಡಾದಲ್ಲಿ ನಡೆದಿದೆ, ಇದೀಗ ಆಕೆಗೆ ನ್ಯಾಯಾಲಯವು ಮರಣದಂಡನೆ ನೀಡಿದೆ ಎಂದು ವರದಿಯಾಗಿದೆ.
ಕೊಲೆಗೈದ ತಾಯಿಯನ್ನು ಭಾರತಿ ಎಂದು ಗುರುತಿಸಲಾಗಿದೆ.
ಕೃಷ್ಣ ಮತ್ತು ಭಾರತಿ ಎಂಬ ದಂಪತಿ ಇಲ್ಲಿ ವಾಸವಾಗಿದ್ದರು. ಭಾರತಿ ಮತ್ತು ಕೃಷ್ಣ ಅವರ ಮದುವೆಗೆ ಭಾರತಿ ಮನೆಯವರ ಒಪ್ಪಿಗೆ ಇರಲಿಲ್ಲ. ಬಲವಂತವಾಗಿ ಭಾರತಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿದ್ದಾರೆ. ಆದರೆ ಆಕೆ ಆತನ ಜೊತೆ ಸಂಸಾರ ನಡೆಸದೆ. ಕೃಷ್ಣನ ಜತೆಗೆ ಓಡಿ ಹೋಗಿ 2019ರಲ್ಲಿ ಕೃಷ್ಣ ಅವರನ್ನು ವಿವಾಹವಾದರು. ಹೀಗೆ ಅವರ ಪ್ರೀತಿಯ ಸಂಕೇತವಾಗಿ ಒಬ್ಬಳು ಮಗಳು ಜನಿಸಿದಳು.
ಭಾರತಿಗೆ ಮೊದಲಿನಿಂದಲ್ಲೂ ದೇವರ ಬಗ್ಗೆ ಅಥವಾ ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆ, ಆ ಕಾರಣಕ್ಕೆ ಆಕೆಗೆ ಒಬ್ಬ ಜ್ಯೋತಿಷ್ಯರು ಸರ್ಪ ದೋಷ ಇದೆ ಎಂದು ಹೇಳಿದರು. ಅಂದಿನಿಂದ ಆಕೆ ಎಲ್ಲ ಕಡೆ ಸರ್ಪ ದೋಷ ನಿವಾರಣೆ ಪೂಜೆ, ಆ ಪೂಜೆ, ಈ ಪೂಜೆ ಎಲ್ಲ ಮಾಡುತ್ತಿದ್ದಳು. ಆದರೆ ತಾಯಿಯ ಈ ಮೂಢನಂಬಿಕೆ ಬಗ್ಗೆ ಆಕೆಯ ಮಗಳು ಅಸಡ್ಡೆ ತೋರುತ್ತಿದ್ದಳು. ಈಕೆಯ ಈ ವರ್ತನೆ ನೋಡಿ ಗಂಡ ಕೃಷ್ಣ ಹಾಗೂ ಆಕೆಯ ಅತ್ತೆ-ಮಾವ ಮನೋವೈದ್ಯರ ಬಳಿಗೆ ಕರೆದೊಯ್ಯಲು ನಿರ್ಧಾರಿಸಿದರು. ಆದರೆ ಆಕೆ ಈ ಮೂಢನಂಬಿಕೆಗೆ ಒಳಗಾಗಿ, ನಾನು ಮಂತ್ರ ಶಕ್ತಿಯಿಂದ ಸರಿಯಾಗುತ್ತೇನೆ ಎಂದು ಚಿಕಿತ್ಸೆಯನ್ನು ವಿರೋಧಿಸಿದಳು ಎಂದು ವರದಿ ತಿಳಿಸಿದೆ.
ಸ್ವಲ್ಪ ದಿನಗಳ ನಂತರ ಭಾರತಿ ಈ ಸರ್ಪ ದೋಷದಿಂದ ಮುಕ್ತಿ ಪಡೆಯಲು ನರಬಲಿ ಪೂಜೆ ಮಾಡಬೇಕು ಎಂದು ನಿರ್ಧರಿಸಿದಳು. ಇದಕ್ಕೆ ಎ.15, 2021 ರಂದು, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಸರ್ಪ ದೋಷದಿಂದ ಮುಕ್ತಿಗೆ ಈ ದಾರಿ ಸರಿ ಎಂದು ಭಾರತಿ ತನ್ನ ಏಳು ವರ್ಷ ಮಗಳ ನಾಲಿಗೆ ಮತ್ತು ಗಂಟಲನ್ನು ಕತ್ತರಿಸಿ ಕ್ರೂರವಾಗಿ ಕೊಂದು ಹಾಕಿದ್ದಾಳೆ. ನಂತರ ಸ್ಥಳದಿಂದ ಭಾರತಿ ಪರಾರಿಯಾಗಿದ್ದಾಳೆ. ಕೃಷ್ಣ ಮನೆಗೆ ಬಂದು ನೋಡಿದರೆ, ತನ್ನ ಮಗುವು ರಕ್ತ ಮಡುವಿನಲ್ಲಿ ಬಿದ್ದಿರುವುದು ಕಂಡು ಅಘಾತಕ್ಕೆ ಒಳಗಾಗಿದ್ದ, ನಂತರ ಈ ವಿಷಯವನ್ನು ಪೋಲಿಸರಿಗೆ ತಿಳಿಸಿದ್ದಾನೆ.
ಪೊಲೀಸರು ತನಿಖೆಯನ್ನು ನಡೆಸಿ, ತಾಯಿ ಭಾರತಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು, ಆಕೆಯನ್ನು ನ್ಯಾಯಲಯದ ಮುಂದೆ ಹಾಜರು ಪಡಿಸಿದ್ದಾರೆ.
ಪೊಲೀಸ್ ಇಲಾಖೆ ನಡೆಸಿದ ಎಲ್ಲ ತನಿಖೆಗಳ ವರದಿಯನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ. ಆಕೆ ತಪ್ಪಿಗೆ ಬಲವಾದ ಸಾಕ್ಷಿಗಳಿದ್ದು, ನ್ಯಾಯಾಲಯ ಆಕೆಗೆ ಮರಣದಂಡನೆ ನೀಡಿದೆ.
ಸೂರ್ಯಪೇಟೆ ಜಿಲ್ಲಾ ನ್ಯಾಯಾಲಯದ ಮೊದಲ ಹೆಚ್ಚುವರಿ ನ್ಯಾಯಾಧೀಶ ಎಂ. ಶ್ಯಾಮ್ ಶ್ರೀ ತೀರ್ಪು ನೀಡಿದ್ದಾರೆ ಹಾಗೂ ಆಕೆಗೆ 5 ಸಾವಿರ ದಂಡ ವಿಧಿಸಲಾಯಿತು. ಒಂದು ವೇಳೆ ದಂಡ ಪಾವತಿಸದಿದ್ದರೆ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸುತ್ತದೆ ಎಂದು ಹೇಳಿದೆ.