ಸುರತ್ಕಲ್ : ರಸ್ತೆ ಅಪಘಾತ ಸಂಭವಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಕ್ಕ ಜಂಕ್ಷನ್ ನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಮೃತ ಯುವಕನನ್ನು ಹಳೆಯಂಗಡಿ ಇಂದಿರಾನಗರ ನಿವಾಸಿ ಗಣೇಶ ದೇವಾಡಿಗ (27) ಎಂದು ತಿಳಿದು ಬಂದಿದೆ.
ಗಣೇಶ ಅವರು ಪಣಂಬೂರು ಬಂದರ್ ನಲ್ಲಿ ಉದ್ಯೋಗದಲ್ಲಿದ್ದು, ಬೆಳಗ್ಗೆ 7ಗಂಟೆಯ ಸುಮಾರಿಗೆ ಕೆಲಸಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.
ಮುಕ್ಕ ಜಂಕ್ಷನ್ ನಲ್ಲಿ ಹಾಕಲಾಗಿದ್ದ ಬ್ಯಾರಿಕೆಟ್ ಬಳಿ ಸ್ಕೂಟರ್ ನಿಧಾನಿಸಿದಾಗ ಹಿಂದಿನಿಂದ ಬಂದ ವಾಹನ ಡಿಕ್ಕಿ ಹೊಡೆದು ಅವರು ಗಂಭೀರ ಗಾಯಗೊಂಡಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆ ದಾಖಲಿಸಿದ್ದು, ಅವರು ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.