ಮಳವಳ್ಳಿ: ಬೈಕ್ ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮಿಕ್ಕೆರೆ ಗ್ರಾಮದ ತಿರುವಿನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಮೃತ ಯುವಕ ದೋರನಹಳ್ಳಿ ಗ್ರಾಮದ ಸ್ವಾಮಿ ಎಂಬವರ ಪುತ್ರ ಮುನೇಶ(26) ಎಂದು ತಿಳಿದು ಬಂದಿದೆ.
ಮುನೇಶ ತಮ್ಮ ಬೈಕ್ ನಲ್ಲಿ ಸ್ನೇಹಿತನೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಕಿರುಗಾವಲು ಕಡೆಯಿಂದ ಬರುತ್ತಿದ್ದ ಸಾರಿಗೆ ಬಸ್ ಮಿಕ್ಕೆರೆ ಗ್ರಾಮದ ತಿರುವಿನಲ್ಲಿ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಮುನೇಶ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಬೆಂಗಳೂರು ಮೂಲದ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಕಿರುಗಾವಲು ಪಿಎಸ್ಐ ಡಿ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.