ದೇಶದಲ್ಲಿ ಬ್ರಿಟಿಷರ ಆಳ್ವಿಕೆಗಿಂತಲೂ ಬಿಜೆಪಿಯಿಂದ ಕೆಟ್ಟ ಆಡಳಿತ: ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್

  August 15,2024
news-banner
ಮಂಗಳೂರು: ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ದೇಶದಲ್ಲಿ ಬ್ರಿಟಿಷರ ಆಳ್ವಿಕೆಗಿಂತಲೂ ಬಿಜೆಪಿ ಕೆಟ್ಟ ಆಡಳಿತ ನಡೆಸುತ್ತಿದೆ. ಇಡಿ, ಸಿಬಿಐ, ಐಟಿ ಮುಂತಾದ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಹೆದರಿಸುತ್ತಿದೆ. ಇದರ ವಿರುದ್ಧ ಕಾಂಗ್ರೆಸಿಗರು ಹೋರಾಡಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಕರೆ ನೀಡಿದ್ದಾರೆ. 

78ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಗುರುವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ ಅವರು, ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯರ ಜೀವನ ಕಷ್ಟಕರ ಆಗಿತ್ತು. ಈಗ ಬಿಜೆಪಿ ಸರ್ಕಾರದ ಧೋರಣೆ, ಭ್ರಷ್ಟಾಚಾರ, ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಾಯಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.  

ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಿ ಐಕ್ಯತೆಗಾಗಿ ಅಸಂಖ್ಯಾತ ಹೋರಾಟಗಾರರು ತ್ಯಾಗ, ಬಲಿದಾನ ನೀಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಭಾರತೀಯರನ್ನು ಗುಲಾಮಗಿರಿಯಿಂದ ಮುಕ್ತಿಗೊಳಿಸಿ, ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗಲು ಮಹಾತ್ಮ ಗಾಂಧೀಜಿ ಮುಖ್ಯ ಭೂಮಿಕೆಯಲ್ಲಿದ್ದರು. ಗಾಂಧೀಜಿ ಅವರು ಸತ್ಯ, ಅಹಿಂಸೆಯ ಅಸ್ತ್ರವನ್ನು ಬಳಸಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಹೋನ್ನತ ಕೊಡುಗೆ ನೀಡಿದರು. ಜವಾಹರ ಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ಚಂದ್ರ ಬೋಸ್, ಮೌಲಾನ ಆಝಾದ್, ಲಾಲ್ ಬಹದ್ದೂರ್ ಶಾಸ್ತ್ರಿ,  ಭಗತ್ ಸಿಂಗ್ ಸೇರಿದಂತೆ ಹಲವಾರು ನಾಯಕರು ಸೇರಿ ಎಲ್ಲರನ್ನು ಒಗ್ಗೂಡಿಸಿ ಹೋರಾಡಿದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು ಎಂದು ಸ್ಮರಿಸಿದರು.

ಈ ಸಂದರ್ಭ ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕ ಜೆ.ಆರ್.ಲೋಬೊ, ಲೋಕಸಭಾ ಅಭ್ಯರ್ಥಿ ಪದ್ಮರಾಜ್, ಮುಖಂಡರಾದ ಸುರೇಶ್ ಬಳ್ಳಾಲ್, ಸುರೇಂದ್ರ ಕಂಬಳಿ, ಜೆ.ಅಬ್ದುಲ್ ಸಲೀಂ, ಅಬ್ದುಲ್ ರವೂಫ್, ಶಾಹುಲ್ ಹಮೀದ್, ಕೆ.ಪಿ.ಥೋಮಸ್, ನವೀನ್ ಡಿ’ಸೋಜ, ವಿಶ್ವಾಸ್ ಕುಮಾರ್ ದಾಸ್, ಶಾಲೆಟ್ ಪಿಂಟೊ, ಸಮೀರ್ ಪಜೀರ್, ಎಸ್.ಅಪ್ಪಿ, ಟಿ.ಹೊನ್ನಯ್ಯ, ಹಯಾತುಲ್ ಖಾಮಿಲ್, ವಿಶ್ವನಾಥ ಬಜಾಲ್, ಶುಭೋದಯ ಆಳ್ವ, ನೀರಜ್ ಚಂದ್ರಪಾಲ್, ಟಿ.ಕೆ.ಸುಧೀರ್, ವಿಕಾಸ್ ಶೆಟ್ಟಿ, , ಭರತೇಶ್ ಅಮೀನ್, ಶಬೀರ್.ಎಸ್, ಸಬಿತಾ ಮಿಸ್ಕಿತ್, ಗೀತಾ ಅತ್ತಾವರ, ಚಂದ್ರಕಲಾ ಜೋಗಿ, ಶಾರಿಕ ಪೂಜಾರಿ, ಮಂಜುಳಾ ನಾಯಕ್, ಚಂದ್ರಕಲಾ ಡಿ.ರಾವ್, ಆಲ್ವಿನ್ ಪ್ರಕಾಶ್, ಎ.ಸಿ.ಜಯರಾಜ್, ಮೋಹನ್ ದಾಸ್ ಕೊಟ್ಟಾರಿ, ಸುಹಾನ್ ಆಳ್ವ, ಝುಬೈರ್ ತಲೆಮೊಗರು, ರಮಾನಂದ ಪೂಜಾರಿ, ರೋಬಿನ್, ಲಕ್ಷ್ಮಣ್ ಶೆಟ್ಟಿ, ಜಿ.ಎ.ಜಲೀಲ್, ಫಯಾಝ್ ಅಮ್ಮೆಮ್ಮಾರ್, ಸೌಹನ್ ಎಸ್.ಕೆ  ಉಪಸ್ಥಿತರಿದ್ದರು.  

ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕಿಂ ಡಿ’ಸೋಜ ಧ್ವಜ ಪ್ರಭಾರಿಯಾಗಿ ನಿರ್ವಹಿಸಿದರು.

Leave Your Comments