ದೂರು ನೀಡಲು ಪೊಲೀಸ್‌ ಠಾಣೆಗೆ ಬಂದ ಮಹಿಳೆಯನ್ನು ಮಲಗಲು ಕರೆದ ಸಿಪಿಐ

  August 14,2024
news-banner
ಬಂಗಾರಪೇಟೆ: ಪೊಲೀಸ್‌ ಠಾಣೆಗೆ ದೂರು ನೀಡಲು ಹೋಗಿದ್ದ ಮಹಿಳೆಯನ್ನು ಪೊಲೀಸ್‌ ನಿರೀಕ್ಷಕ "ಮಲಗಲು ಬಾ" ಎಂದು ಕರೆದಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದೆ.

ನೆರೆಮನೆಯವರು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಬಂಗಾರಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಲು ಹೋಗಿದ್ದೆ. ಆಗ ಠಾಣೆಯ ಪೊಲೀಸ್‌ ವೃತ್ತ ನಿರೀಕ್ಷಕ ನಮ್ಮ ಮೇಲೆಯೇ ದೌರ್ಜನ್ಯ ಎಸಗುತ್ತಿದಾರೆ ಎಂದು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಆಗಾಗ ಪೊಲೀಸ್‌ ಸಿಬ್ಬಂದಿಯನ್ನು ಮನೆಗೆ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ. ಸಾರ್ವಜನಿಕವಾಗಿ ಅವಮಾನಿಸುತ್ತಾರೆ. ಠಾಣೆಗೆ ಕರೆಸಿಕೊಂಡು "ಮಲಗಲು ಬಾ" ಎಂದು ಹೇಳುತ್ತಾರೆ. ಅವಾಚ್ಯವಾಗಿ ಬೈಯ್ಯುತ್ತಾರೆ ಎಂದು ದೂರಿದ್ದಾರೆ.

ಘಟನೆಯಿಂದ ಅಸ್ವಸ್ಥರಾಗಿರುವ ಮಹಿಳೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಂದಲೇ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಪೊಲೀಸರಿಂದ ಮುಕ್ತಿ ನೀಡುವಂತೆ ಒತ್ತಾಯಿಸಿದ್ದಾರೆ.

ವೀಡಿಯೊ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೆಜಿಎಫ್‌ ಎಸ್ಪಿ ಶಾಂತರಾಜು ಅವರು, ಪೊಲೀಸ್‌ ನಿರೀಕ್ಷಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಕೆಜಿಎಫ್‌ ಡಿವೈಎಸ್ಪಿ ಪಾಂಡುರಂಗ ಅವರಿಗೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Leave Your Comments