ಸುರತ್ಕಲ್: ಮಂಗಳೂರು ನಗರ ಪಾಲಿಕೆಯ ಸುರತ್ಕಲ್ ವಲಯ ಕಚೇರಿಗೆ ತಾಗಿಕೊಂಡಂತಿರುವ ಅಕ್ರಮ ಕ್ಯಾಂಟೀನ್ ತೆರವಿಗೆ ಮಹಾನಗರ ಪಾಲಿಕೆ ಮುಂದಾಗದೇ ಮೀನ-ಮೇಷ ಎಣಿಸುತ್ತಿದ್ದು, ಇಬ್ಬಗೆ ಧೋರಣೆ ಅನುಸರಿಸುತ್ತಿದೆ ಎಂದು ಬೀದಿ ಬದಿ ವ್ಯಾಪಾರಿಗಳು ಮನಪಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮನಪಾ ಸುರತ್ಕಲ್ ವಲಯ ಕಚೇರಿಯ ಹಿಂಭಾಗದಲ್ಲಿರುವ ಅಭೀಷ್ ಮಾಲ್ ಮುಂಭಾಗದಲ್ಲಿನ ಮನಪಾಕ್ಕೆ ಸೇರಿದ ರಸ್ತೆ ಬದಿ ಅನಧೀಕೃತವಾಗಿ ಸಿಮೆಂಟ್‌ಹಾಕಿ ಟೀ ಕ್ಯಾಂಟೀನ್ ಸ್ಥಾಪಿಸಲಾಗಿದೆ. ಮಂಗಳೂರು ನಗರ ಸೇರಿದಂತೆ ಮನಪಾ ವ್ಯಾಪ್ತಿಯಲ್ಲಿ ಟೈಗರ್ ಕಾರ್ಯಾಚರಣೆಯ ನೆಪದಲ್ಲಿ ಬಡವರ ಗೂಡಂಗಡಿಗಳನ್ನು ಜೆಸಿಬಿಗಳನ್ನು ಬಳಸಿ ಪುಡಿಗೈದು ಬಳಿಕ ತೆರವು ನಡೆಸುತ್ತಿದ್ದ ಮಹಾನಗರ ಪಾಲಿಕೆ, ತನ್ನ ಕಾಲ ಬುಡದಲ್ಲೇ ಇರುವ ಅನಧೀಕೃತ ಗೂಡಂಗಡಿ ತೆರವಿಗೆ ಯಾಕೆ ಮೀನ-ಮೇಷ ಎಣಿಸುತ್ತಿದೆ. ಈವರೆಗೂ ಅನಧಿಕೃತ ಗೂಡಂಗಡಿ ತೆರವಿಗೆ ಮುಂದಾಗದ ಮನಪಾ ಮತ್ತು ಅನಧೀಕೃತ ಗೂಡಂಗಡಿಗೂ ಏನು ನಂಟು ಎಂದು ಪ್ರಶ್ನೆ ಮಾಡಿರುವ ಬೀದಿಬದಿ ವ್ಯಾಪಾರಿಗಳು, ಮನಪಾ ಸುರತ್ಕಲ್ ವಲಯದ ಅಧಿಕಾರಗಳೇ ಈ ಅನಧೀಕೃತ ಗೂಡಂಗಡಿ ನಡೆಸುತ್ತಿದ್ದಾರಾ ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ.
ಟೈಗರ್ ಕಾರ್ಯಾಚರಣೆಯ ನೆಪದಲ್ಲಿ ಮನಪಾ ಅಧಿಕಾರಿಗಳು ಅಂಗಡಿಗಳ ತೆರವು ಮಾಡಿಸುತ್ತಿದ್ದರು. ಆದರೆ, ತನ್ನ ಕಾಂಪೌಂಡ್ ಪಕ್ಕದಲ್ಲೇ ಇರುವ ಅನಧೀಕೃತ ಗೂಡಂಗಡಿ ತೆರವಿಗೆ ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಬೀದಿಬದಿ ವ್ಯಾಪಾರಿಗಳು ದೂರಿದ್ದಾರೆ. ಇಷ್ಟು ದಿನಗಳಾದರೂ ಆ ಗೂಡಂಗಡಿ ತೆರವುಗೊಳಿಸದಿರುವ ಕಾರಣವನ್ನು ಮನಪಾ ಸ್ಪಷ್ಟ ಪಡಿಸಬೇಕೆಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಮನಪಾ ಅಧಿಕಾರಿ ಯಾದವ ಹೊಸಬೆಟ್ಟು ಅವರನ್ನು ಮಾಧ್ಯಮಗಳು ಸಂಪರ್ಕಿಸಿ ಸಾರ್ವಜನಿಕರ ಪ್ರಶ್ನೆಗಳನ್ನು ಅವರ ಮುಂದಿಟ್ಟ ವೇಳೆ ಉತ್ತರಿಸಿದ ಅವರು, "ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್‌ವಲಯ ವ್ಯಾಪ್ತಿಯಲ್ಲಿ ಎಲ್ಲಾ ಅಂಗಡಿಗಳಿಗೆ ಮೊದಲು ಸೂಚನೆ ನೀಡಿ ತೆರವು ಗೊಳಿಸಲು ಅವಕಾಶ ನೀಡಲಾಗಿತ್ತು. ಆದರೆ. ಈ ಅಕ್ರಮ ಗೂಡಂಗಡಿಯ ಮಾಲಕರು ಲಭ್ಯರಿಲ್ಲದ ಹಿನ್ನೆಲೆಯಲ್ಲಿ ಅವರಿಗೆ ತೆರವು ಗೊಳಿಸುವ ಸೂಚನೆ ನೀಡಲಾಗಿರಲಿಲ್ಲ. ಹಾಗಾಗಿ ಅಂಗಡಿ ತೆರವುಗೊಳಿಸಿಲ್ಲ. ಇಂದು ಸಂಜೆಯೊಳಗೆ ಎಲ್ಲಾ ಅಂಗಡಿಗಳನ್ನು ತೆರವುಗೊಳಸಲಾಗುವುದು ಎಂದು ಆ.8ರಂದು ಗುರುವಾರ ಸ್ಪಷ್ಟನೆ ನೀಡಿದ್ದರು. ಇಂದು ಆ.13 ಆದರೂ ಇನ್ನೂ ಅಂಗಡಿಯ ತೆರವು ಮಾಡಿಸದೇ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ ಎಂಬುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ನಡುವೆ ನಾಗರಪಂಚಮಿ ನಿಮಿತ್ತ ಸುರತ್ಕಲ್ ಪೇಟೆಯಲ್ಲಿ ಒಂದು ದಿನದ ಮಟ್ಟಿಗೆ ಹಾಕಲಾಗಿದ್ದ ಹಣ್ಣು ಕಾಯಿ ಅಂಗಡಿಗಳ ತೆರವಿಗೆ ಮನಪಾ ಅಧಿಕಾರಿಗಳು ಯತ್ನಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿತ್ತು. ಈ ವೇಳೆ ನಾಗರ ಪಂಚಮಿಯ ನಿಮಿತ್ತ ಅಂಗಡಿ ಹಾಕಲಾಗಿದ್ದು, ಅದೇ ದಿನ ಸಂಜೆಯ ವೇಳೆಗೆ ತೆರವು ಗೊಳಿಸುವುದಾಗಿ ಅಂಗಡಿದಾರರು ಸಿಬ್ಬಂದಿಗೆ ಸಮಜಾಯಿಷಿ ನೀಡಿದರು ಎನ್ನಲಾಗಿದೆ. ಇದಕ್ಕೆ ಅಧಿಕಾರಿಗಳು ಒಪ್ಪದೇ ಈಗಲೇ ತೆರವುಗೊಳಿಸುವಂತೆ ಸೂಚಿಸಿದ್ದು, ಆಗ ಸಾರ್ವಜನಿಕರು, ಸ್ಥಳೀಯ ರಿಕ್ಷಾ ಚಾಲಕರು ಮನಪಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಪರಿಣಾಮ ಅಧಿಕಾರಿಗಳು ಅಂಗಡಿಗಳನ್ನು ತೆರವು ಮಾಡದೇ ಸಂಜೆಯೊಳಗೆ ಖಾಲಿ ಮಾಡುವಂತೆ ಹೇಳಿ ತೆರಳಿದ್ದರು.
ಪ್ರಜಾಪ್ರಭುತ್ವ ಭಾರತದಲ್ಲಿ ಎಲ್ಲರಿಗೂ ಒಂದೇ ಕಾನೂನು ಇರುವಾಗ ಮನಪಾ ವ್ಯಾಪ್ತಿಯಲ್ಲಿ ಇದ್ದ ಉಳಿದ ಗೂಡಂಗಡಿಗಳಿಗೆ ಒಂದು ಕಾನೂನು, ಮನಪಾ ಅಧಿಕಾರಿಗಳಿಗೆ ಬೇಕಾಗಿರುವ ವ್ಯಕ್ತಿಗಳಿಗೆ ಇನ್ನೊಂದು ಕಾನೂನು ಇದೇಯೇ ?. ತನ್ನ ಕಾಂಪೌಂಡ್ ಪಕ್ಕದಲ್ಲೇ ಅನಧೀಕೃತ ಗೂಡಂಗಡಿ ಇದ್ದರೂ ಅದನ್ನು ತೆರವು ಗೊಳಸಲು ಮುಂದಾಗದ ಮನಪಾ ಸುರತ್ಕಲ್ ವಲಯ ಅಧಿಕಾರಿಗಳಿಗೂ ಈ ಅನಧಿಕೃತ ಗೂಡಂಗಡಿಗೂ ಏನು ನಂಟು ಎಂಬುದನ್ನು ಮನಪಾ ಅಧಿಕಾರಿಗಳು ಸ್ಪಷ್ಟ ಪಡಿಸಬೇಕಿದೆ.