ಹುಬ್ಬಳ್ಳಿ: ತಾಲೂಕಿನ ತಾರಿಹಾಳ ಗ್ರಾಮದ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ನಾಲ್ಕು ಕೈಗಾರಿಕಾ ಗ್ಯಾರೇಜ್ ಗಳಲ್ಲಿ ಕಬ್ಬಿಣದ ಸಾಮಗ್ರಿ ಕಳವುಗೈದಿದ್ದ ಮೂವರು ಆರೋಪಿಗಳನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಉಣಕಲ್ಲನ ಕರಿಯಪ್ಪ ತಳವಾರ, ಸುನೀಲ ಕಟ್ಟಿಮನಿ, ಸಂಗಮೇಶ ಬಬಲೇಶ್ವರ ಎಂದು ತಿಳಿದು ಬಂದಿದೆ.
ಇವರು ಗುರುವಾರ ತಡರಾತ್ರಿ ತಾರಿಹಾಳದ ನಾಲ್ಕು ಕೈಗಾರಿಕಾ ಗ್ಯಾರೇಜ್ ಗಳಲ್ಲಿ ಅಂದಾಜು 1.39 ಲಕ್ಷ ರೂ. ಮೌಲ್ಯದ ಕಬ್ಬಿಣದ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನಾ ಸಂಬಂಧ ಕಾರ್ಯಚರಣೆಗಿಳಿದ ಪೊಲೀಸರು ಮೂವರು ಆರೋಪಿಗಳನ್ನು ಶನಿವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬಂಧಿತರಿಂದ ಗೂಡ್ಸ್ ವಾಹನ ಸೇರಿದಂತೆ 4.39 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.