ತುಮಕೂರು: ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿಯಲ್ಲಿ ವಾಂತಿ, ಭೇದಿಯಿಂದ 35 ಜನ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಅಸ್ವಸ್ಥರ ಪೈಕಿ 8 ಜನರ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲುಷಿತ ನೀರು ಸೇವನೆಯಿಂದ ಜನರು ಅಸ್ವಸ್ಥರಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.
ಚಿನ್ನೇನಹಳ್ಳಿ 300 ಮನೆಗಳಿರುವ ಗ್ರಾಮವಾಗಿದ್ದು, ಭಾನುವಾರದಿಂದ 6 ದಿನಗಳ ಕಾಲ ಇಲ್ಲಿ ಲಕ್ಕಮ್ಮ- ಕೆಂಪಮ್ಮ ಜಾತ್ರೆ ನಡೆಯುತ್ತಿದೆ.
ಭಾನುವಾರ ರಾತ್ರಿ ಗ್ರಾಮಸ್ಥರು ದೇವರ ಕಾರ್ಯ ಮುಗಿಸಿದ್ದರು. ಸೋಮವಾರ ಬೆಳಗ್ಗೆಯಿಂದ ಗ್ರಾಮದ ಹಲವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲುಷಿತ ಕುಡಿಯುವ ನೀರಿನಿಂದಾಗಿ ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.