ಆಸ್ಟ್ರೇಲಿಯಾ: ಸಿಡ್ನಿಯ ಕರ್ನೆಲ್‌ನಲ್ಲಿ ತೆರೆ ಅಪ್ಪಳಿಸಿ ಸಮುದ್ರಕ್ಕೆ ಬಿದ್ದು ಕಣ್ಣೂರು ಮೂಲದ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.
ಬಂಡೆಯೊಂದರ ಮೇಲೆ ಸಮುದ್ರವನ್ನು ವೀಕ್ಷಿಸುತ್ತಿದ್ದ ವೇಳೆ ತೆರೆ ಅಪ್ಪಳಿಸಿದೆ. ಈ ಸಙದರ್ಭ ಅಲೆಯ ರಭಸಕ್ಕೆ ಮೂವರು ಸಮುದ್ರಕ್ಕೆ ಬಿದ್ದಿದ್ದಾರೆ. ಆ ಪೈಕಿ ಮತ್ತೋರ್ವ ಮಹಿಳೆ ಈಜಿ ಸುರಕ್ಷಿತ ಸ್ಥಳಕ್ಕೆ ಬಂದರು. ಆದರೆ ಇಬ್ಬರು ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಣ್ಣೂರಿನ ಎಡಕ್ಕಾಡ್ ಮೂಲದ ಸಿರಾಜುದ್ದೀನ್ ಅವರ ಪತ್ನಿ ಮರ್ವಾ ಹಾಶಿಮ್ (35) ಮೃತರು. ಅವರು ಕೆಎಂಸಿಸಿ ಸಂಸ್ಥಾಪಕ ನಾಯಕ ಸಿ ಹಾಶಿಮ್ ಮತ್ತು ಕಣ್ಣೂರು ಕಾರ್ಪೊರೇಷನ್ ಕೌನ್ಸಿಲರ್ ಫಿರೋಜಾ ಹಾಶಿಮ್ ಅವರ ಪುತ್ರಿ. ಇವರಿಗೆ ಮೂರು ಮಕ್ಕಳಿದ್ದಾರೆ. ಆಸ್ಟ್ರೇಲಿಯದ ಯೂನಿವರ್ಸಿಟಿ ಆಫ್ ಸಿಡ್ನಿಯಲ್ಲಿ ಡಿಸ್ಟಿಂಗ್‌ಶನೊಂದಿಗೆ ಮಾಸ್ಟರ್ ಆಫ್ ಸ್ನಾಬಿಲಿಟಿ ಪದವಿ ಪಡೆದುಕೊಂಡಿದ್ದರು. ಇನ್ನೋರ್ವ ಮೃತ ಮಹಿಳೆಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ದುರಂತ ನಡೆಯುತ್ತಿದ್ದಂತೆ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಕರೆ ಮಾಡಿದ್ದಾರೆ.
ಹೆಲಿಕಾಪ್ಟರ್ ಸಹಾಯದಿಂದ ಸಮುದ್ರದಲ್ಲಿ ಶೋಧ ನಡೆಸಿದ ನಂತರ ಇಬ್ಬರನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ ಹಚ್ಚಿ ಸಮುದ್ರದಿಂದ ಹೊರಕ್ಕೆ ತರಲಾಯಿತು ಎಂದು ತಿಳಿದು ಬಂದಿದೆ.
ತಕ್ಷಣ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಿದರೂ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬಲವಾದ ಅಲೆಗಳು ಮತ್ತು ಜಾರು ಬಂಡೆಗಳು ಅಪಘಾತಕ್ಕೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ.