ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರನ್ನು ಮೈಸೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಚಿತ್ರದುರ್ಗಮೂಲದ ರೇಣುಕಾ ಸ್ವಾಮಿ ಎಂಬವರ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿಯ ಕೊಲೆ ಆಗಿತ್ತು. ದರ್ಶನ್ ಸೂಚನೆ ಮೇಲೆ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ದರ್ಶನ್ ಕೂಡ ಇದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ದರ್ಶನ್ ಸೇರಿ 10 ಜನರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ನಟ ದರ್ಶನ್ ಅವರ ಆತ್ಮೀಯರಾದ ನಟಿ ಪವಿತ್ರ ಗೌಡ ಅವರ ಫೋಟೋಗಳಿಗೆ ರೇಣುಕಾ ಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲವಾಗಿ ಕಮೆಂಟ್, ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಯಲಾಗಿತ್ತು. ಜೂ. 8ರಂದು ರಾತ್ರಿ ವಿನಯ್ ಎಂಬವರ ಶೆಡ್ ಗೆ ಕರೆತಂದು ಬಲವಾಧ ಆಯುಧದಿಂದ ರೇಣುಕಾ ಅವರಿಗೆ ಹೊಡೆದು ಕೊಲೆಗೈದು, ಮೃತದೇಹನ್ನು ಮೋರಿಗೆ ಎಸೆಯಲಾಗಿತ್ತು.
ಜೂ. 9ರಂದು ಮೋರಿಯಲ್ಲಿ ಬೀದಿ ನಾಯಿಗಳು ಮೃತದೇಹವನ್ನು ಎಳೆಯುತ್ತಿದ್ದನ್ನು ನೋಡಿ, ಪಕ್ಕದಲ್ಲಿದ್ದ ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಬಂದಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ ಸೇರಿದಂತೆ ನಾಲ್ವರು ರೇಣುಕಾ ಸ್ವಾಮಿಗೆ ಹಲ್ಲೆ ಮಾಡಿ ಕೊಲೆಗೈದಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸರಿಗೆ ಮೃತದೇಹ ಸಿಕ್ಕಾಗ ತನಿಖೆ ಶುರುವಾಗಿದೆ. ಈ ಪ್ರಕರಣದಲ್ಲಿ ಮೂವರು ಮೊದಲು ಠಾಣೆಗೆ ಬಂದು ನಾವೇ ಕೊಲೆ ಮಾಡಿದ್ದು, ಹಣಕಾಸಿನ ವಿಚಾರದಲ್ಲಿ ಈ ಕೊಲೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಪೊಲೀಸರಿಗೆ ಈ ಕುರಿತುಶಂಕೆ ವ್ಯಕ್ತವಾಗಿದ್ದು, ಮತ್ತಷ್ಟು ಆಳವಾಗಿ ತನಿಖೆ ನಡೆಸಿದಾಗ ಘಟನೆ ಹಿಂದಿನ ಕಾರಣ ತಿಳಿದು ಬಂದಿದೆ.