ಸುರತ್ಕಲ್: ನಾಪತ್ತೆಯಾಗಿದ್ದ ವಿದ್ಯಾದಾಯಿನಿ ಶಾಲೆಯ 4 ವಿದ್ಯಾರ್ಥಿಗಳು ಶವವಾಗಿ ಪತ್ತೆ

  February 28,2024
news-banner
ಹಳೆಯಂಗಡಿ: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಮಂಗಳವಾರ ನಾಪತ್ತೆಯಾಗಿದ್ದ ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ನಾಲ್ಕು ವಿದ್ಯಾರ್ಥಿಗಳು ಹಳೆಯಂಗಡಿಯ ಕೊಪ್ಪಳ ಆಣೆಕಟ್ಟ ರೈಲ್ವೆ ಸೇತುವೆಯ ಕೆಳಭಾಗದ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸುರತ್ಕಲ್ ಅಗರಮೇಲ್ ನಿವಾಸಿ ಚಂದ್ರಕಾಂತ ಎಂಬವರ ಮಗ ಯಶ್ವಿತ್(15),  ಹಳೆಯ‌ಂಗಡಿ ತೋಕೂರು ನಿವಾಸಿ ವಸಂತ ಎಂಬವರ ಮಗ ರಾಘವೇಂದ್ರ (15), ಸುರತ್ಕಲ್ ಗುಡ್ಡೆಕೊಪ್ಲ ನಿವಾಸಿ ವಿಶ್ವನಾಥ ಎಂಬವರ ಮಗ ನಿರೂಪ (15) ಮತ್ತು ಚಿತ್ರಾಪುರ ನಿವಾಸಿ ದೇವದಾಸ್ ಎಂಬವರ‌ ಪುತ್ರ ಅನ್ವಿತ್ (15) ಎಂದು ಗುರುತಿಸಲಾಗಿದೆ. 

ಮೃತರೆಲ್ಲರೂ ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳಾಗಿದ್ದು, ಮಂಗಳವಾರ ನಡೆದ ಇಂಗ್ಲಿಷ್ ಪೂರ್ವ ಸಿದ್ಧತಾ ಪರೀಕ್ಷೆ ಬರೆದು ಮನೆಗೆ ಬಾರದೆ ಕಾಣೆಯಾಗಿದ್ದರು. ಈ ಕುರಿತು ಮಕ್ಕಳ ಪೋಷಕರು ರಾತ್ರಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ನಾಪತ್ತೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಸುರತ್ಕಲ್ ಪೊಲೀಸರು, ಶಾಲೆ ಮತ್ತು ಬಸ್ ನಿಲ್ದಾಣದ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ತರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸುರತ್ಕಲ್ ಬಸ್ ನಿಲ್ದಾಣದಿಂದ ಬಸ್ ಹತ್ತಿ ಹಳೆಯಂಗಡಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದಿರುವುದನ್ನು ಪತ್ತೆಹಚ್ಚಿತ್ತಾರೆ. ಜೊತೆಗೆ ವಿದ್ಯಾರ್ಥಿಯೋರ್ವನ ಬಳಿ ಇತ್ತೆನ್ನಲಾದ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ವಿದ್ಯಾರ್ಥಿಗಳು ನದಿಯ ದಡಕ್ಕೆ ಬಂದಿರುವುದನ್ನು ಖಚಿತ ಪಡಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನದಿಯ ದಡದಲ್ಲಿ ಮಕ್ಕಳ‌ ಶಾಲೆಯ ಚೀಲಗಳು, ಚಪ್ಪಲಿ ಶಾಲೆಯ ಸಮವಸ್ತ್ರಗಳು ಪತ್ತೆಯಾಗಿವೆ. 

ಸಂಶಯದಿಂದ ಸ್ಥಳೀಯರ ಸಹಾಯದಿಂದ ನದಿಯಲ್ಲಿ ಹುಡುಕಾಡಿದಾಗ ನಾಲ್ಕೂ‌ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ‌ ಎಂದು ತಿಳಿದು ಬಂದಿದೆ. ಎಲ್ಲಾ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವೆನ್ ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ‌. ಘಟ‌ನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.‌




Leave Your Comments