ಮಂಗಳೂರು ಉತ್ತರ ಕಾಂಗ್ರೆಸ್ ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಸುರತ್ಕಲ್ ಬ್ಲಾಕ್ ಮಾಜಿ ಅಧ್ಯಕ್ಷರು ಮತ್ತು ಮೊಯ್ದೀನ್ ಬಾವ ಸಹಚರರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂಬ ಆಗ್ರಹ ತೀಕ್ಷ್ಣವಾಗಿ ಆರಂಭಗೊಂಡಿದೆ.
ಕಳೆದ ವಿಧಾನ ಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರಿದ್ದ ಮಾಜಿ ಶಾಸಕ ಮೊಯ್ದೀನ್‌ಬಾವ ಅವರು ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಮಂಗಳೂರು ಉತ್ತರ ಕ್ಷೇತ್ರದಿಂದಲೇ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದರು.
ಚುನಾವಣಾ ಪ್ರಚಾರದ ವೇಳೆ ಪಕ್ಷದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕೈ ಹೈಕಮಾಂಡ್ ಹಾಗೂ ನಾಯಕರಿಗೆ ತೆರೆದ ವೇದಿಕೆಗಳಲ್ಲಿ ಬೈದಾಡಿಕೊಂಡಿದ್ದರು. ಈ ಮೂಲಕ ಕೈ ನಾಯಕರು ಮತ್ತು ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿದ್ದರು.
ಸದ್ಯ ಮೊಯ್ದೀನ್ ಬಾವ ಅವರು ಮತ್ತೆ ಕಾಂಗ್ರೆಸ್ ಸೇರ್ಪಡೆಗೆ ಸಿದ್ಧರಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರೂ ಇತ್ತೀಚೆಗೆ ನಡೆದಿದ್ದ ಕಾರ್ಯಕರ್ತರ ಸಭೆಯಲ್ಲಿ " ಯಾವುದೇ ಕಾರಣಕ್ಕೂ ಹೈಕಮಾಂಡ್, ಡಿಕೆಶಿ ಸಹಿತ ಕಾಂಗ್ರೆಸ್ ನಾಯಕರನ್ನು ನಿಂಧಿಸಿರುವವರಿಗೆ ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ನೀಡುವುದಿಲ್ಲ " ಎಂದು ಖಡಕ್ ಆಗಿಯೇ ಸೂಚನೆ ನೀಡಿದ್ದರು.
ಇದರ ಜೊತೆಗೆ ಇತ್ತೀಚೆಗೆ ಪ್ರಭಾಕರ ಭಟ್ ಅವರ ವಿರುದ್ಧ ಮೊಯ್ದೀನ್ ಬಾವ ನೇತೃತ್ವದಲ್ಲಿ ಪ್ರತಿಭಟನೆಗಳನ್ನು ಆಯೋಜಿಸಲಾಗಿತ್ತು. ಇದಕ್ಕೆ ಪೊಲೀಸ್ ಇಲಾಖೆ ನಿರಾಕರಿಸಿದಾಗ ಬಾವ ನೇತೃತ್ವದಲ್ಲಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಮನವಿ ಸಲ್ಲಿಸುವ ಸಂದರ್ಭ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಉಮೇಶ್ ದಂಡಕೇರಿ ಮತ್ತು ಹಾರಿಸ್ ಅವರು ಬಾವಾ ಜೊತೆ ಕಾಣಿಸಿಕೊಂಡಿದ್ದರು.
ಆ ಬಳಿಕದಿಂದ ಕಾಂಗ್ರೆಸ್ ನಲ್ಲಿ ಪಕ್ಷ ವಿರೋಧಿ ಕೃತ್ಯ ಎಸಗಿರುವ ಉಮೇಶ್ ದಂಡಕೇರಿ, ಹಾರಿಸ್ ಸೇರಿದಂತೆ ಅವರ ಜೊತೆ ಗುರುತಿಸಿಕೊಂಡಿರುವ ನಾಯಕರು, ಕಾರ್ಯಕರ್ತರನ್ನು ಪಕ್ಷ ದಿಂದ ಉಚ್ಚಾಟಿಸಬೇಕೆಂಬ ಕೂಗು ಕಾಂಗ್ರೆಸ್ ವಲಯದಲ್ಲಿ ಹೆಚ್ಚಾಗಿದೆ. ಈ ಸಂಬಂಧ ಕಾಂಗ್ರೆಸ್ ನ ಅಧೀಕೃತ ವಾಟ್ಸಾಪ್ ಖಾತೆಗಳಲ್ಲಿ ಮೆಸೇಜ್ ಗಳು ಹರಿದಾಡುತ್ತಿದೆ.
ಮೊದಲೇ ಭಟ್ ವಿರುದ್ಧ ಕಾಂಗ್ರೆಸ್ ಕ್ರಮ ವಹಿಸುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಗರಂ ಆಗಿದ್ದರೆ ಅವರನ್ನು ಸಮಾಧಾನ ಪಡಿಸುವ ಮಧ್ಯೆ ಇನ್ನೊಂದು ತಲೆ ಬಿಸಿ ಮಂಗಳೂರಿನ ನಾಯಕರು ತಲೆಕೆಡಿಸಿರುವುದಂತು ಸತ್ಯ. ಕೈ ಪಡೆ ಮುಂದೆ ಯಾವ ರೀತಿಯ ಕ್ರಮ ವಹಿಸಲಿದೆ ಎಂದು ಕಾದು ನೋಡಬೇಕಿದೆ.