ಮೈಸೂರು: ಉದ್ಯೋಗ ನೀಡುವುದಾಗಿ ನಂಬಿಸಿ ಭೂಮಿ ಪಡೆದು ವಂಚನೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಡಕನಹಳ್ಳಿಯಲ್ಲಿ ನಡೆದಿದ್ದು, ಇದರಿಂದ ಯುವ ರೈತ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ಯುವಕ ಅಡಕನಹಳ್ಳಿ ಗ್ರಾಮದ ನಿವಾಸಿ ಸಿದ್ದರಾಜು ಎಂದು ತಿಳಿದು ಬಂದಿದೆ.
ಮೃತ ಸಿದ್ದರಾಜು ಅವರಿಗೆ ಖಾಸಗಿ ಕಂಪನಿಯೊಂದು ಉದ್ಯೋಗ ನೀಡುವುದಾಗಿ ಹೇಳಿ ಭೂಮಿ ಪಡೆದಿತ್ತು. ಮಾತ್ರವಲ್ಲದೆ ಸಿದ್ದರಾಜು ತಂದೆ ಸಿದ್ದೇಗೌಡ ಸೇರಿದಂತೆ ಅನೇಕ ಮಂದಿ ರೈತರು ಈ ಕೈಗಾರಿಕಾ ಪ್ರದೇಶಕ್ಕೆ ಜಮೀನು ನೀಡಿದ್ದಾರೆ. ಬಳಿಕ ಭೂಮಿ ಪಡೆಯುವಾಗ ಖಾಸಗಿ ಕಂಪನಿಯು ರೈತರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಉದ್ಯೋಗ ನೀಡದೆ ವಂಚಿಸಿದೆ. ಇದರಿಂದ ಮನನೊಂದ ಸಿದ್ದರಾಜು ಅವರು ಕಂಪನಿ ವಿರುದ್ಧ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯ ಪರಿಣಾಮ ರೈತರು ಅಕ್ರೋಶ ವ್ಯಕ್ತಪಡಿಸಿದ್ದು, ಕಳೆದ 45 ದಿನಗಳಿಂದ ಕಂಪನಿ ವಿರುದ್ಧ ರೈತರು ಧರಣಿ ನಡೆಸುತ್ತಿದ್ದಾರೆ. ಈವರೆಗೂ ಜನಪ್ರತಿನಿಧಿಗಳು, ಅಧಿಕಾರಿಗಳು ನೆರವಿಗೆ ಬಂದಿಲ್ಲ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.